ನಬೋಕಾಫ್, ವ್ಲಾಡಿಮಿರ್ ವ್ಲಾಡಿಮಿರೋವಿಚ್
1899-1977. ರಷ್ಯದ ಕಾದಂಬರಿಕಾರ. ವ್ಲಾಡಿಮಿರ್ ಸಿರಿನ್ ಎಂಬುದು ಈತನ ಕಾವ್ಯನಾಮ. ಶ್ರೀಮಂತನಾಗಿದ್ದ ಈತನ ತಂದೆಯನ್ನು ರಷ್ಯದ ರಾಜಪ್ರಭುತ್ವ ಬೆಂಬಲಿಗರು ಕೊಂದರು. ರಷ್ಯದ ಕ್ರಾಂತಿಯ ಅನಂತರ ಈತ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿ, ಫ್ರಾನ್ಸ್ ಮತ್ತು ಜರ್ಮನಿಗಳಲ್ಲಿ ವಾಸಿಸಿ, 1940ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಉಪಾಧ್ಯಾಯನಾದ. ವಾದವಿವಾದಗಳಿಗೆ ಎಡೆಕೊಟ್ಟಿರುವ ಹಲವು ಕಾದಂಬರಿಗಳನ್ನು ಈತ ರಚಿಸಿದ್ದಾನೆ. ಅವುಗಳಲ್ಲಿ ಹೆಚ್ಚು ಪ್ರಸಿದ್ಧಿಪಡೆದಿರುವುದು ಲೋಲಿಟ (1955); ಇದರ ಮತ್ತೊಂದು ಹೆಸರು ದಿ ಕನ್‍ಫೆಷನ್ ಆಫ್ ಎ ವಿಡೋಡ್ ಮೇಲ್. ಇದರಲ್ಲಿ ಒಂಬತ್ತರಿಂದ ಹದಿನಾಲ್ಕು ವರ್ಷದ ವಯಸ್ಸಿನ ಹುಡುಗಿಯರಿಂದ ವಿಶೇಷವಾಗಿ ಆಕರ್ಷಿತನಾಗುತ್ತಿದ್ದ ವಿದುರನೊಬ್ಬನ ವೈಯುಕ್ತಿಕ ಜೀವನವನ್ನು-ಅದರಲ್ಲಿಯೂ ಲೋಲಿಟ ಎನ್ನುವ ಹುಡುಗಿಯೊಡನೆ ಸಾಗಿಸಿದ ಜೀವನವನ್ನು ನಿಸ್ಸಂಕೋಚವಾಗಿ ವರ್ಣಿಸಲಾಗಿದೆ. ಓದುಗರಲ್ಲಿ ವಿಶೇಷವಾದ ಆಸಕ್ತಿಯನ್ನು ಕೆರಳಿಸಿ ಅನೇಕರ ಟೀಕೆ ಚರ್ಚೆಗಳಿಗೆ ಒಳಗಾದ ಈ ಕೃತಿ ಒಂದು ಮನಃಪ್ರವೃತ್ತಿಯ ಸಂಕೋಚರಹಿತ ನಿರೂಪಣೆಯಾಗಿದೆ. ಇಲ್ಲಿ ಭಾಷೆಯನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ.
(ಕೆ.ಎ.; ಎಲ್.ಎಸ್.ಎಸ್.)

	ಈತನ ಇತರ ಕೃತಿಗಳೆಂದರೆ ನಿನ್ (Pಟಿiಟಿ) 1957, ದಿ ರಿಯಲ್ ಲೈಫ್ ಆಫ್  ಸೆಬಸ್ಟಿಯನ್ ನೈಟ್ 1959, ಇದೇ ಕೃತಿ ಅಮೇರಿಕಾದಲ್ಲೂ ಪ್ರಕಟವಾಯಿತು. ಪೇಲ್‍ಫೈರ್ 1962, ಅಡ (ಂಜಚಿ) 1969, ಕಾದಂಬರಿಯನ್ನು ಪ್ರಕಟಿಸಿದ್ದಲ್ಲದೆ ರಷ್ಯನ್ ಸಾಹಿತ್ಯವನ್ನು ಇಂಗ್ಲೀಷ್‍ಗೆ ಭಾಷಾಂತರಿಸಿದ್ದಾನೆ. 1951ರಲ್ಲಿ ಸ್ಪೀಕ್ ಮೆಮೊರಿ ಎಂಬ ಅವನ ಜೀವನ ಚರಿತ್ರೆ ಪ್ರಕಟಿಸಲಾಯಿತು. 
ಕರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ಈತ ಮಾಡಿದ ಭಾಷಣಗಳ ಸಂಗ್ರಹ 'ಲೆಕ್ಷರ್ ಅಂಡ್ ಲಿಟರೇಚರ್ ಎಂಬ ಗ್ರಂಥವನ್ನು 1980ರಲ್ಲಿ ಪ್ರಕಟಿಸಲಾಯಿತು. 1995ರಲ್ಲಿ ದಿ ಸ್ಟೋರಿಸ್ ಆಫ್ ವ್ಲಾಡಿಮಿರ್ ಎಂಬ ಗ್ರಂಥ ಪ್ರಕಟವಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ